ದೊಡ್ಡ ನೆಗ್ಗಿಲು-
ಪಿಡೇಲಿಯೇಸೀ ಕುಟುಂಬಕ್ಕೆ ಸೇರಿದ ಒಂದು ಏಕವಾರ್ಷಿಕ ಸಸ್ಯ.  ಪಿಡೇಲಿಯಮ್ ಮ್ಯೂರೆಕ್ಸ್ ಇದರ ಶಾಸ್ತ್ರೀಯ  ಹೆಸರು.  ಇದರ ತವರು ಉಷ್ಣವಲಯ ಪ್ರದೇಶ.  ಆಫ್ರಿಕದ ಉಷ್ಣವಲಯ,  ಭಾರತ, ಶ್ರೀಲಂಕಾಗಳಲ್ಲಿ ಕಂಡುಬರುತ್ತದೆ.  ದಕ್ಷಿಣ ಭಾರತದ ಪೂರ್ವ ಕರಾವಳಿಯಲ್ಲಿ ಇದು ಬಲು ಸಾಮಾನ್ಯ.  15 - 37 ಸೆಂಮೀ. ಎತ್ತರಕ್ಕೆ ನೇರವಾಗಿ ಬೆಳೆಯುವುದಲ್ಲದೆ ಹುಲುಸಾಗಿ ರೆಂಬೆಯೊಡೆಯುತ್ತದೆ.  ಗಿಡದ ತುಂಬ ಗ್ರಂಥಿಗಳುಂಟು.  ಎಲೆಗಳು ಸ್ವಲ್ಪ ಮಟ್ಟಿಗೆ ಮಾಂಸಲವಾಗಿವೆ.  ದೀರ್ಘ ಅಂಡಾಕಾರದ ಇವು ಸುಮಾರು 5 ಸೆಂಮೀ. ಉದ್ದಕ್ಕೆ ಬೆಳೆಯುವುವು.  ಎಲೆಗಳ ಮೇಲೆ ಗ್ರಂಥಿಗಳುಂಟು.  ಹೂಗಳು ಒಂಟೊಂಟಿಯಾಗಿ ಎಲೆಗಳ ಕಕ್ಷಗಳಲ್ಲಿ ಅರಳುವುವು.  ಹೂ ಬಿಡುವ ಕಾಲ ಅಕ್ಟೋಬರ್ - ಡಿಸೆಂಬರ್.  ಹೂಗಳ ಬಣ್ಣ ಶುಭ್ರ ಹಳದಿ.  ಹೂಗಳಲ್ಲಿ ತಲಾ 5 ಪತ್ರಗಳು, 5 ದಳಗಳು,  4 ಕೇಸರಗಳು ಹಾಗೂ ಎರಡು ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಉಂಟು.  ಕೇಸರಗಳು ದಳಸಮೂಹದ ಗಂಟಲಿಗೆ ಅಂಟಿಕೊಂಡಿವೆ.  ಇವುಗಳಲ್ಲಿ ಎರಡು ಉದ್ದವಾಗಿಯೂ ಎರಡು ಮೋಟಾಗಿಯೂ ಇವೆ.  ಅಂಡಕೋಶದಲ್ಲಿ 2 ಕೋಣೆಗಳುಂಟು.  ಒಂದೊಂದು ಕೋಣೆಯಲ್ಲಿನ ಅಂಕಡಗಳ ಸಂಖ್ಯೆ ಎರಡು.  ಫಲ ಸಂಪುಟಮಾದರಿಯದು.  ಫಲದ ಹೊರ ಬದಿಯಲ್ಲಿ ನಾಲ್ಕು ಮುಳ್ಳುಗಳುಂಟು.

ದೊಡ್ಡ ನೆಗ್ಗಿಲಿಗೆ ಔಷಧೀಯ ಮಹತ್ತ್ವ ಉಂಟು.  ಇದರ ಎಲೆ ಮತ್ತು ಕಾಂಡಗಳ ಕಷಾಯ ಮೂತ್ರಸ್ರಾವ ಉತ್ತೇಜಕ ಹಾಗೂ ಕಾಮೋದ್ದೀಪಕ ಎಂದು ಪ್ರಸಿದ್ಧವಾಗಿದೆ.  ಹಾಗೆಯೇ ಇದು ಮೇಹರೋಗ (ಗಾನರೀಯ) ಉರಿಮೂತ್ರ, ವೀರ್ಯಸ್ರಾವ, ಸಂಯಮವಿಲ್ಲದ ಮೂತ್ರ ವಿಸರ್ಜನೆ ಮೊದಲಾದವುಗಳ ಶಮನಕ್ಕೆ ಉಪಯೋಗವಾಗುತ್ತದೆ.  ಎಲೆಗಳ ರಸವನ್ನು ವ್ರಣಗಳಿಗೆ ಹಚ್ಚುವುದುಂಟು.
(ಪಿ.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ